Thursday, July 3, 2014

ಸ್ನೇಹಸೌಧ

ಅಪರಿಚಿತ ನಾನು
ಅಪರಿಚಿತೆ ನೀನು
ತೆಗೆದೆ ನೀ ಪಾಯ 
ಕಟ್ಟಲು ಸ್ನೇಹ ಕೋಟೆಯ 

ಮೌನ ರಾಜ ನಾ
ಮಾತಿನ ರಾಣಿ ನೀ
ಕಟ್ಟಿ ಮುಗಿಸಿದೆವು 
ಕೂಡಿ, ಸ್ನೇಹ ಕೋಟೆಯ

ಚಂಡಮಾರುತವೆ ಬರಲಿ
ಭೂಕಂಪನವೆ ಆಗಲಿ
ಸುಭದ್ರ ನಾವಿಬ್ಬರೂ
ಈ ಸ್ನೇಹವೆಂಬ ಕೋಟೆಯಲಿ

Monday, June 23, 2014

ಅಪೇಕ್ಷೆ

ವ್ಯಥೆ  ನೀಡಿ ನೀ ನನಗೆ 
ಪ್ರೀತಿ ಕಥೆಯ ಮಧ್ಯಕ್ಕೆ
ಪೂರ್ಣ ಬಿಂದುವನಿಟ್ಟು 
ಮಾಯವಾದೆಯಾ ಗೆಳತಿ

ಸ್ವಲ್ಪವೂ ನೀ ಮಾಡದೆ 
ಆಲೋಚನೆ, ನನ್ನ ಪ್ರೀತಿ
ಹಣತೆಯ ನಂದಿಸಿ ಎಲ್ಲಿ
ಕಣ್ಮರೆಯಾದೆಯೇ ಗೆಳತಿ

ನೀ ಏನೋ ಜಾರಿದೆ 
ಚಿರನಿದ್ರೆಗೆ, ಮುಳುಗಿಸಿ
ನನ್ನ ಕಣ್ಣೀರ ಕಡಲಲ್ಲಿ
ಒಂಟಿ ಮಾಡಿರುಹೆ ಗೆಳತಿ

ಹೃದಯದ ಪ್ರತಿ ಮಿಡಿತ
ನುಡಿಯುತಿಹುದು, ಗೆಳತಿ
ಎಂದಾದರೊಮ್ಮೆ ನೀನು
ತಿರುಗಿ ಬಂದೆ ಬರುತಿ  

Friday, June 13, 2014

ನಿವೇದನೆ

ಒಲವೇ ನಿನ್ನ ಚೆಲುವ ಚೆಲ್ಲಿ
ತುಂಬಿಸಿದೆ ನನ್ನ  ಹೃದಯ
ಬತ್ತಿ ಹೋಗಿದ್ದ ನಾಡಿಯಲ್ಲಿ
ಸುರಿಸಿದೆ ಪ್ರೀತಿಯ ಮಳೆಯ

ನಿನ್ನ ನೋಟದಲಿ ಹುದುಗಿತ್ತು
ಅರಿಯದ ಮೂಕ ವಿಸ್ಮಯ
ಆ ನೋಟದ ಸುಳಿಗೆ ಸಿಲುಕಿ
ನನ್ನ ಮನವಾಯಿತು ತನ್ಮಯ

ನಿನ್ನ ಸಣ್ಣ ಕಿರುನಗೆ ಸೂಚಿಸಿತ್ತು
ಏನೋ ಸಂಭ್ರಮದ ವಿಷಯ
ನಮ್ಮಿಬ್ಬರ ನಡುವೆ ಶುರುವಾಗಿತ್ತು
ಸ್ನೇಹ ಪ್ರೀತಿಯ ಪರಿಣಯ

ಕೊನೆಗೂ ಬಂತು ನಮ್ಮಿಬ್ಬರ 
ಭಾವನೆಗಳು ಸೇರೋ ಸಮಯ
ಪ್ರಕಟಿಸಿದೆ ನಾನು ನಿನಗೆ
ನನ್ನೊಡಲಾಳದ ಪ್ರೀತಿಯ.

ನಿರೀಕ್ಷಕ

ಒಂದಿರುಳ ಕನಸಿನಲಿ ಕಾಣಿಸಿದೆ ನೀ ಬಾಲೆ
ಮೋಹಿತನಾಗಿ ಬರೆದಿರುವೆ ಪ್ರೇಮದ ಓಲೆ
ಬಿಂಬಿಸಿರುವೆ ಮಧುರ ಕ್ಷಣಗಳ ಸರಮಾಲೆ
ನಿನ್ನ ಅಂದ ಬಣ್ಣಿಸಲು ಸಾಲಲಿಲ್ಲ ಅಕ್ಷರಮಾಲೆ

ಕೆಂದುಟಿಯ ಮೇಲೆ ನಲಿದಾಡುತ್ತಿದ್ದ ಕಿರುನಗೆ
ನಾಸಿಕದಲಿ ನೆಲೆಯೂರಿದ್ದ ಆ ಕೆಂಡಸಂಪಿಗೆ
ಕಣ್ಣ ಕುಕ್ಕುವ ನಿನ್ನ ಹೊಳಪಿನ ಮೈಕಾಂತಿಗೆ
ಮರುಳಾಗಿ ಮರೆತೆ  ನನ್ನೆ ನಾ ಅರೆ ಘಳಿಗೆ

ಕುಡಿನೋಟ ಬೀರಿ ನೀ ಮಿಂಚಂತೆ ಸಾಗಲು
ಗುಡುಗಿತು ಬಾನು ಕೂಡ ನಿನ್ನ ತಡೆಯಲು
ಮಳೆಯ ಹನಿಹನಿಯಲ್ಲೂ ನೀನೆ ಕಾಣಿಸಲು
ಕಣ್ಮುಚ್ಚಿ ನಿಂತೆ ನಿನ್ನ ಜೊತೆ ಬೆರೆಯಲು

ತನುವು ಸಾಗಿತು ನಿನ್ನ ನೆರಳ ಹುಡುಕುತ
ಮನವು ಬಿನ್ನವಿಸಿತು ನಿನ್ನ ನಾಮಾಂಕಿತ
ಹೃದಯ ಯಾಚಿಸಿತು ನಿನ್ನ ಪ್ರೀತಿ ಸಹಮತ
ತಿಳಿಸುವೆಯಾ ಚೆಲುವೆ ನಿನ್ನ ಅಭಿಮತ

Friday, December 27, 2013

ಜ್ಞಾನದೀಪ

ದೀಪ ಹಚ್ಚಿರಣ್ಣ ಮನದಲಿ
ಅರಿವಿನ ದೀಪ ಹಚ್ಚಿರಣ್ಣ

ದೀಪ ಎಂದರೆ  ಬರಿಯ ದೀಪವಲ್ಲ

ಜಾತಿ ಭೇದವ ತೊಲಗಿಸೊ ದೀಪ
ದ್ವೇಷ, ಅಸೂಯೆ ದಹಿಸುವ ದೀಪ
ಪ್ರೀತಿ ಪ್ರೇಮವ ಪಸರುವ ದೀಪ

ದೀಪ ಎಂದರೆ  ಬರಿಯ ದೀಪವಲ್ಲ

ಅರಾಜಕತೆಯ ಅಡಗಿಸೋ ದೀಪ
ಭ್ರಷ್ಟಾಚಾರವ ನಿವಾರಿಸೊ ದೀಪ
ಶಿಷ್ಟಾಚಾರವ ಬೆಳಗಿಸೋ ದೀಪ

ದೀಪ ಎಂದರೆ  ಬರಿಯ ದೀಪವಲ್ಲ

ಅನೀತಿ,ಅಜ್ಞಾನವ ಅಳಿಸುವ ದೀಪ
ಮೂಢನಂಬಿಕೆಯ ಕೊಲ್ಲುವ ದೀಪ
ಸತ್ಯವ ನುಡಿವ ಕ್ರಾಂತಿಯ ದೀಪ

Thursday, October 3, 2013

ಆತ್ಮಶಾಂತಿ

ಗುರಿಯೆ ಇರದ ದಾರಿಯಲಿ
ಅಲೆಯುತ್ತಿದ್ದೆ ಗುರಿಯ ಹುಡುಕುತ
ತಿರುವೆ ಸಿಗದ ಬಾಳಿನಲಿ
ತಿರುಗುತ್ತಿದ್ದೆ ತಿರುವ ಬಯಸುತ

ಹಾವು ಏಣಿಯ ಆಟವಾಡುತಿತ್ತು
ಅದೃಷ್ಟವು ಬಾಳೆಂಬ ಪಯಣದಿ
ದೇಹವ ಬಿಟ್ಟು ಜೀವ ಧಾವಿಸಿತು  
ನಿರಂತರ ಸೋಲಿನ ಬೇಸರದಿ

ಅಲೆದು ಅಲೆದು ದಣಿದ ಪ್ರಾಣಕೆ
ತುಸು ದೂರದಿ ಕಂಡಿತು ಚಿತಾಜ್ಯೋತಿ
ಆತ್ಮವು ಹರುಷದಿ ಹೇಳಿತು ಮೆಲ್ಲಗೆ
ಸದ್ಯ! ಈ ಬಾಳಿಗೆ ದೊರೆಯಿತಲ್ಲ  ಮುಕ್ತಿ

Wednesday, September 11, 2013

ಜನನಿ

ಅಮ್ಮ ನಿನ್ನ ಪ್ರೀತಿ ಬಹು ಮಧುರ
ಅದ ಪಡೆದ ನನ್ನ ಜೀವನ ಅಮರ

ನೀ ಕಲಿಸಿಕೊಟ್ಟೆ ನನಗೆ ಮೊದಲ ನುಡಿ

ನೀನೆ ಬರೆದೆ ನನ್ನ ಬದುಕಿನ ಮುನ್ನುಡಿ

ಬೆಳೆಸಿದೆ ನನ್ನ, ನೀಡಿ  ಅಕ್ಕರೆಯ ಕೈತುತ್ತು

ಬೆಂಬಲಿಸಿದೆ ನನ್ನ, ಕೊಟ್ಟು ಪ್ರೀತಿಯ ಮುತ್ತು

ಜೀವನ ಪಯಣದಿ ನಾ ಸಾಗಲು ಮುಂದೆ

ನೀ ನೆರಳಾಗಿ ಇದ್ದೆ ಸದಾ ಬೆನ್ನ ಹಿಂದೆ

ತ್ಯಾಗ, ಮಮಕಾರಕೆ ನೀನೆ ಮೂರ್ತ ರೂಪ

ನನ್ನ ಸಾಧನೆಯ ಹಾದಿಗೆ ನೀನೆ ದಾರಿ ದೀಪ

ನನ್ನ ಏಳಿಗೆಗಾಗಿ ನಿನ್ನ ಜೀವ ತೇದಿದ್ದೆ

ಗುಟುಕು ಸುಖದಲ್ಲೆ ನೀ ತೃಪ್ತಿ ಪಡುತ್ತಿದ್ದೆ

ಅಮ್ಮ ನೀನೊಂದು ವಾತ್ಸಲ್ಯದ ಸಾಗರ

ಎಷ್ಟು ಮಾಡಿದರು ಸಾಲದು ನಮಸ್ಕಾರ

Saturday, August 24, 2013

ಶುಭದಿನ

ನಸುಕಿನಲಿ ಇಬ್ಬನಿಯ ಕರಗಿಸಿ
ಹಕ್ಕಿಗಳ ಕಲರವ ಮೊಳಗಿಸಿ
ಹೊಸ ಕನಸುಗಳ ಗರಿಗೆದರಿಸಿ
ಅರುಣ ಬರುವನು ಉದಯಿಸಿ

ಕಂಡ ಕನಸುಗಳ ನನಸಾಗಿಸೋ ಛಲ

ನಿನ್ನೆಗಳು ಕೊಟ್ಟ ನೋವನು ಮರೆವ ಬಲ
ಸಾಧನೆಯ ಹಾದಿಯಲಿ ಏರುವ ಹಂಬಲ
ಸಿಗಲಿ ದಿನನಿತ್ಯ ಪ್ರೋತ್ಸಾಹದ ಬೆಂಬಲ

ಹೊಸ ಗುರಿಯ ಕಡೆಗೆ ಸಾಗಲಿ ಪಯಣ

ಸಫಲತೆ ಪಡೆಯಲು ತೊಡು ನೀ ಪಣ
ಸೋಲಲ್ಲೂ ಗೆಲುವ ಪಡೆವುದೆ ಜೀವನ
ಹೊರಡು ನೀ,ಶುಭವಾಗಲಿ ನಿನಗೀದಿನ..!

Tuesday, June 25, 2013

ಕೀರ್ತಿ

ಕೊಡಚಾದ್ರಿ ನೀನೆಷ್ಟು ರಮಣೀಯ
ನೀ ನಿಸರ್ಗದ ಅದ್ಭುತ ವಿಸ್ಮಯ

ಗಿರಿರಾಜ ಆಯೋಜಿಸಿದ ಸ್ವಯಂವರ

ತುಂಬಿ ತುಳುಕುತಿತ್ತು ಅಂತ್ಹಪುರ
ಎಲ್ಲರ ಮನದಲು ಒಂದೆ ಕಾತುರ
ಯಾರಾ ನಿನ್ನ ಪಡೆವ ಸರದಾರ

ವರುಣನ ಮಳೆಯ ನರ್ತನ

ಅರುಣನ ಹೊಳೆಯುವ ಕಿರಣ
ಚಂದ್ರನ ನಗುವಿನ ಹೂರಣ
ಸೆಳೆಯಲಿಲ್ಲ ನಿನ್ನ  ಗಮನ 

ಕಾಮನ ಬಿಲ್ಲಿನ ಚಮತ್ಕಾರ

ಮೇಘಧೂತನ ಬೆಳ್ಳಿ ಗೋಪುರ
ಗಾಳಿಯ ಸಂಗೀತದ ಹಂದರ
ಮೂಡಿಸಿದವು ನಿನ್ನಲಿ ಬೇಸರ

ಬಂತು ಅನಿಸಿಕೆ ತಿಳಿಸುವ ಸರದಿ
ಕುತೂಹಲದಿ ಕೇಳುತಿರಲು ಮಂದಿ
ನೀ ನುಡಿದೆ ನಾಚುತ ಮನದಿ
ಆಗಬೇಕೆಂದು ವನರಾಜನ ಮಡದಿ

ನೀ ಹೇಳಿದ್ದೊಂದೆ, ಆತನ ಹಸಿರ ಸಿರಿ
ಹೆಚ್ಚಿಸುರುವುದು ನಿನ್ನ ಕೀರ್ತಿಯ ಗರಿ

Monday, May 20, 2013

ಚುನಾವಣೆ

ಬಂತು ಬಂತು ಚುನಾವಣೆ
ಎಲ್ಲೆಲ್ಲೂ ದುಡ್ಡಿನ ಚಲಾವಣೆ


ಮದ್ಯದ ಸಾಗರ ಹರಿಸಿ
ಹಣದ ಹಡಗಿನಲ್ಲಿ ಕೂರಿಸಿ
ಮತ್ತಿನ ಅಲೆಯಲಿ ತೇಲಿಸಿ
ಕೇಳುವರು ಮತ ಯಾಚಿಸಿ


ನಿತ್ಯ ವಸ್ತುಗಳ ಬೆಲೆ ತುಟ್ಟಿ
ಕೋಟಿಗೆ ಸಿಗದಾಯ್ತು ರೊಟ್ಟಿ
ಕೊಡುವರು ಭರವಸೆಗಳ ಪಟ್ಟಿ
ಮಾಡಲು ತಮ್ಮ ಕುರ್ಚಿ ಗಟ್ಟಿ


ಜನರೆಲ್ಲಾ ಕೂಡಿ ಚರ್ಚಿಸಿ
ನೇತಾರರ ಹಿನ್ನೆಲೆ ಸಂಗ್ರಹಿಸಿ

ನಾಯಕ ಯಾರೆಂದು ನಿರ್ಧರಿಸಿ
ನಂತರ ಹೋಗಿ ಮತ ಚಲಾಯಿಸಿ


ಇನ್ನಾದರೂ  ಆಗಲಿ ಬದಲಾವಣೆ
ನಿಷ್ಟಾವಂತರಿಗೆ ಸಿಗಲಿ ಮನ್ನಣೆ 

Monday, April 29, 2013

ಪ್ರಕೃತಿ

ಭೂಮಿಯಲೆಲ್ಲ ನರ್ತಿಸುತ್ತಿತ್ತು ಬರಗಾಲದ ಕರಿ ನೆರಳೇ
ರಮಿಸಲೆಂದು ರಭಸದಿ ಬಂತು ಧಾರಾಕಾರವಾಗಿ ಮಳೆ
ನಾಚಿ ಮೌನದಿ ಸಮ್ಮತಿಸಿತು ನವ ವಧುವಿನಂತೆ ಇಳೆ
ನವಮಾಸಗಳಾಗಿರಲು ಎಲ್ಲೆಲ್ಲೂ ಹಚ್ಚ ಹಸಿರ ಹೊಂಬಾಳೆ
ಎಲ್ಲರಲ್ಲೂ ಬರಗಾಲ ಮುಗಿಯಿತೆಂಬ ಸಂತೋಷದ ಕಳೆ
ತಿಳಿದುಕೊ ಮಾನವ ನಿನ್ನನ್ನುಳಿಸಿರುವುದು ಮರ-ಗಿಡಗಳೇ                                                                  
                                                                 

Sunday, April 28, 2013

ನಿದ್ದೆ

ನಿದ್ದೆ ನೀ ಎಲ್ಲಿದ್ದೆ
ನಿನ್ನ ಹುಡುಕುತಲ್ಲಿದ್ದೆ
ನೀ ಮುಂದೆ ಓಡುತ್ತಿದ್ದೆ
ನಾ ಹಿಂಬಾಲಿಸುತ್ತಿದ್ದೆ
ಜಾರಿ ನಾ ಕೆಳಗೆ ಬಿದ್ದೆ
ಕಣ್ಣ ಬಿಟ್ಟು ಮೇಲೆದ್ದೆ
ಅರಿತೆ, ನಾ ನಿನ್ನಲ್ಲೆ ಇದ್ದೆ